ಲಂಡನ್ ಸಮ್ಮೇಳನದಲ್ಲಿ `ಒಳ್ಳೆಯ ತಾಲಿಬಾನ್‘ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡಿದ್ದಲ್ಲ. ಅದರ ಮೊದಲೇ ಅಮೆರಿಕನ್ ಸರ್ಕಾರ`ಒಳ್ಳೆಯ ತಾಲಿಬಾನ್‘ ಹುಡುಕಲು ಆರಂಭಿಸಿತ್ತು. ಪಾಕಿಸ್ತಾನದ ಐಎಸ್ಐ ಮೂಲಕ ತಾಲಿಬಾನಿನ ಕೆಲವು ನಾಯಕರ ಜತೆ ಅಮೆರಿಕ ಮಾತುಕತೆ ನಡೆಸಿದೆಯಂತೆ. ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರತಿನಿಧಿ ಸಹ ಕೆಲವು ತಾಲಿಬಾನಿ ನಾಯಕರ ಜತೆ ಗುಪ್ತ ಮಾತುಕತೆ ನಡೆಸುತ್ತಿದ್ದಾರಂತೆ. ಸಮ್ಮೇಳನದ ನಂತರವಂತೂ `ಒಳ್ಳೆಯ ತಾಲಿಬಾನ್‘ ಹುಡುಕುವ ಕೆಲಸ ರಭಸದಿಂದ ಸಾಗಿದೆ.ಅಮೆರಿಕ ಹಿಂದೆ ತಾಲಿಬಾನ್ ಸಕರ್ಾರದಲ್ಲಿ ವಿದೇಶ ಮಂತ್ರಿಯಾಗಿದ್ದವನ ಜತೆ ಬಹಿರಂಗವಾಗಿಯೇ ಮಾತುಕತೆಯಲ್ಲಿ ತೊಡಗಿದೆ. `ಒಳ್ಳೆಯ‘ ತಾಲಿಬಾನ್ ಸೃಷ್ಟಿಗೆ ಫಂಡ್`ಒಳ್ಳೆಯ ತಾಲಿಬಾನ್‘ ಸಿಗದಿದ್ದರೆ ಕೆಲವು ತಾಲಿಬಾನರನ್ನು`ಒಳ್ಳೆಯ‘ವರನ್ನಾಗಿಸಲು (ಅಥವಾ `ಒಳ್ಳೆಯ‘ ತಾಲಿಬಾನರನ್ನು ಸೃಷ್ಟಿಸಲು) ಭಾರೀ ಪ್ರಮಾಣದಲ್ಲಿ ದುಡ್ಡು ಹೊಂಚಲಾಗುತ್ತಿದೆ.ನಾಟೋ ದೇಶಗಳು 65 ಕೋಟಿ ಡಾಲರು `ಟ್ರಸ್ಟ್ ಫಂಡ್‘ನ್ನು ಇದಕ್ಕಾಗಿ ತೆಗೆದಿರಿಸಿವೆ. ತಾಲಿಬಾನರನ್ನು ಬೆಂಬಲಿಸುವ ಕೆಲವು ಬಾಡಿಗೆ ಸೈನ್ಯ ಒದಗಿಸುವ ದೊರೆಗಳು ಮತ್ತು ಬುಡಕಟ್ಟು ನಾಯಕರನ್ನು `ಮನಸ್ಸು ಬದಲಾಯಿಸಲು‘ (ಅಥವಾ`ಒಳ್ಳೆಯ‘ವರನ್ನಾಗಿಸಲು) ಅದನ್ನು ಬಳಸಲಾಗುವುದಂತೆ. ಸೌದಿ ಅರೇಬಿಯಾ ಸಹ `ಒಳ್ಳೆಯ‘ ತಾಲಿಬಾನರ ಸೃಷ್ಟಿಗಾಗಿ ಅಫ್ಘಾನಿ ಸರ್ಕಾರಕ್ಕೆ 15 ಕೋಟಿ ಡಾಲರು ಬೆಂಬಲಧನ ಘೋಷಿಸಿದೆ.ತಾಲಿಬಾನರನ್ನು ವಿನಾಶ ಮಾಡಿ ಅಫ್ಘಾನಿಸ್ತಾನದ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದ ಅಮೆರಿಕ ಮತ್ತು ನಾಟೋಗಳಿಗೆ ಲಂಡನ್ ಸಮ್ಮೇಳನದಲ್ಲಿ `ಒಳ್ಳೆಯ ತಾಲಿಬಾನ್‘ ಕಂಡುಕೊಳ್ಳುವ ಈ ಸರ್ಕಸ್ಸು ಏಕೆ ಅಗತ್ಯವಾಯಿತು? ಎಷ್ಟೇ ಮಿಲಿಟರಿ ಪಡೆಗಳು ಶಸ್ತ್ರಾಸ್ತ್ರ ಗಳನ್ನು ಪಂಪ್ ಮಾಡಿದರೂ, ಅಫ್ಘಾನಿಸ್ತಾನದ ಮಿಲಿಟರಿ ಅತಿಕ್ರಮಣ ಮುಂದುವರೆಸುವುದು ಸಾಧ್ಯವಿಲ್ಲ. ಅಫ್ಘಾನಿಸ್ತಾನದಲ್ಲಿ ಈ ಪಡೆಗಳ ಮುಂದುವರಿಕೆಗೆ ವ್ಯಾಪಕ ವಿರೋಧ ಹೆಚ್ಚುತ್ತಿದೆ.ಅಫ್ಘಾನಿಸ್ತಾನದಲ್ಲಿ ಯುದ್ಧಕ್ಕೆ ನಾಟೋ ದೇಶಗಳಲ್ಲಿ ಬೆಂಬಲ ಕುಗ್ಗುತ್ತಿದೆ. ಅಮೆರಿಕದ ಪಡೆಗಳು ಸುಸ್ತಾಗಿವೆ. ನಾಟೋ ದೇಶಗಳು ಕೊಡಬೇಕಾಗಿದ್ದ 10 ಸಾವಿರ ಹೆಚ್ಚಿನ ಪಡೆಗಳು ಬರುವ ಸಂಭವವಿಲ್ಲ. ಫ್ರಾನ್ಸ್ ಹೆಚ್ಚಿನ ಪಡೆಗಳನ್ನು ಕಳಿಸಲು ನಿರಾಕರಿಸಿದೆ. ಜರ್ಮನಿ ಬರಿಯ 500 ಹೆಚ್ಚಿನ ಪಡೆಗಳನ್ನು ಕಳಿಸುವುದಾಗಿ ಹೇಳಿದೆ. ಹಾಲಂಡ್ ಇದ್ದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆ. ಇದರ ಬಗ್ಗೆ ವಿವಾದದಲ್ಲಿ ಅಲ್ಲಿನ ಸರ್ಕಾರ ಬಿದ್ದು ಹೋಗಿದೆ.
ಭಾರತದ ಅಭಿಪ್ರಾಯ ಲಂಡನಿನಲ್ಲಿ ಲೆಕ್ಕಕ್ಕೆ ಇಲ್ಲ. ಇವೆರಡೇ ಆಯ್ಕೆಗಳು ಇರುವುದು ಅಮೆರಿಕದ ಸರ್ಕಾರಕ್ಕೆ. ಯುಧ್ಧ ಮುಂದುವರೆಸುತ್ತಲೇ, ಅದರ ಜವಾಬ್ದಾರಿ ವೆಚ್ಚ ಇತರ ದೇಶಗಳ ಮೇಲೆ ಹಾಕಲು ಅಮೆರಿಕ ಪ್ರಯತ್ನಿಸುತ್ತಿದೆ. ಈಗಿನ ಅಂದಾಜು ಪ್ರಕಾರ ಅವರ ಉದ್ದೇಶ ಸಾಧನೆ ಆಗಬೇಕಾದರೆ ಅಮೆರಿಕನ್ ಪಡೆಗಳು ಕನಿಷ್ಟ 5 ವರ್ಷ ಮುಂದುವರೆಯಬೇಕು. ತಾಲಿಬಾನೀ ಪ್ರತಿರೋಧ ಕಡಿಮೆ ಮಾಡಿದರೆ ಮಯರ್ಾದೆಯಿಂದ ನಿಧಾನವಾಗಿ ಅಫ್ಘಾನಿಸ್ತಾನದಿಂದ ಹೋಗಬಹುದು. ತನ್ನ ಅಧಿಪತ್ಯ ಉಳಿಸಿಕೊಳ್ಳಬಹುದು ಅಂತ ಅಮೆರಿಕದ ಲೆಕ್ಕಾಚಾರ. ಭಯೋತ್ಪಾದಕರನ್ನು (ಅಲ್-ಖೈದಾ ವನ್ನು ನೇರವಾಗಿ,ತಾಲಿಬಾನರನ್ನು ಐಎಸ್ಐ ಮೂಲಕ) ಹುಟ್ಟು ಹಾಕಿ ಅವರ ವಿರುದ್ಧ ಸತತ ಯುದ್ಧ ಹೂಡುತ್ತೇವೆ ಎಂಬ ಸೋಗು ಹಾಕಿದ ಅಮೆರಿಕದ ನೀತಿಯಲ್ಲಿನ ವೈರುಧ್ಯವೇ ಇಂತಹ ಪರಿಸ್ಥಿತಿಗೆ ಕಾರಣ.
ಅವಮಾನಕಾರಿ ರೀತಿಯಲ್ಲಿ ಅಫ್ಘಾನಿಸ್ತಾನದಿಂದ ಕಾಲ್ತೆಗೆಯಬೇಕು ಅಥವಾ ತಾಲಿಬಾನಿನ ಜತೆ ಸಮಜಾಯಿಷಿ ಮಾಡಿಕೊಳ್ಳಬೇಕು. ಅಮೆರಿಕದ ಈ ಉಪಾಯ ಕೈಗೂಡಬೇಕಾದರೆ (ತಾಲಿಬಾನ್ ಹುಟ್ಟು ಹಾಕಿ ನಿಯಂತ್ರಿಸುತ್ತಿರುವ)ಪಾಕಿಸ್ತಾನದ ಐಎಸ್ಐ ಬೆಂಬಲ ಬೇಕು. ಆದ್ದರಿಂದ ಅಮೆರಿಕದ ದೃಷ್ಟಿಯಲ್ಲಿ ಲಂಡನ್ ಸಮ್ಮೇಳನದ ನಂತರ ಪಾಕಿಸ್ತಾನದ `ಬೆಲೆ‘ಏರಿದೆ. ಅಮೆರಿಕದ ಕುರುಡು `ಜೂನಿಯರ್ ಪಾರ್ಟನರ್‘ ಆಗಿರುವ ಯುಪಿಎ ಸರ್ಕಾರದ ಹುಂಬ ವಿದೇಶ ನೀತಿ ಈ ಬೆಳವಣಿಗೆಯನ್ನು ಮುಂಗಾಣಲು ಮತ್ತು ಅರ್ಥ ಮಾಡಿಕೊಳ್ಳಲು ವಿಫಲವಾಗಿದೆ. ಆದ್ದರಿಂದ ಭಾರತದ ಅಭಿಪ್ರಾಯವನ್ನು ಲಂಡನ್ ಸಮ್ಮೇಳನದಲ್ಲಿ ಕೇಳುವವರೇ ಇರಲಿಲ್ಲ. ಅಮೆರಿಕದ ಬಾಲಂಗೋಚಿ ಎಂದು ಕಾಣಲಾದ ಭಾರತ ತನ್ನ ಸ್ವತಂತ್ರ ಅಭಿಪ್ರಾಯವನ್ನು ಸಮ್ಮೇಳನದಲ್ಲಿ ಧೃಢವಾಗಿ ಪ್ರತಿಪಾದಿಸಲೂ ಇಲ್ಲ. ಅಫ್ಘಾನಿಸ್ತಾನಕ್ಕೆ ಧನ ಬೆಂಬಲ ನೀಡಿದ ಅತೀ ದೊಡ್ಡ ದೇಶ, ಉತ್ತಮ ಸಂಬಂಧ ಮತ್ತು ವ್ಯೂಹಾತ್ಮಕ ಆಸಕ್ತಿ ಹೊಂದಿರುವ ಭಾರತ, ಅಫ್ಘಾನಿಸ್ತಾನದ ಸಮಸ್ಯೆ ಬಗೆಹರಿಸುವುದರಲ್ಲಿ ಯಾವುದೇ ಪಾತ್ರ ವಹಿಸಲು ಸಾಧ್ಯವಾಗದೇ ಇರುವುದು ಯುಪಿಏ ಸರ್ಕಾರದ ಹುಂಬ ವಿದೇಶ ನೀತಿಯ ವೈಫಲ್ಯಕ್ಕೆ ಹಿಡಿದ ಕನ್ನಡಿ.ಅಫ್ಘಾನಿಸ್ತಾನದ ಮಿಲಿಟರಿ ಅತಿಕ್ರಮಣವನ್ನು ಬಲವಾಗಿ ವಿರೋಧಿಸಿ ಶಾಂತಿ ಮಾತುಕತೆ ಮೂಲಕ ಪರಿಹಾರ ಹುಡುಕುವ ನೀತಿಯನ್ನು ಪ್ರತಿಪಾದಿಸುತ್ತಾ ಬಂದಿದ್ದರೆ ಭಾರತ ಸ್ವತಂತ್ರವಾದ ವಿಶೇಷ ಪಾತ್ರ ವಹಿಸಬಹುದಾಗಿತ್ತು.